ವಿದೇಶೀ ಬಂಡವಾಳ - 
	ದೇಶವೊಂದರ ಶಿಕ್ಷಣ, ಕೈಗಾರಿಕೆ, ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಹೊರದೇಶದ ಹೂಡಿಕೆದಾರರು ಹೂಡುವ ಬಂಡವಾಳ (ಫಾರಿನ್ ಕ್ಯಾಪಿಟಲ್). ಬಂಡವಾಳ ಆರ್ಥಿಕಾಭಿವೃದ್ಧಿಯ ಯಂತ್ರವಿದ್ದಂತೆ. ಪ್ರಪಂಚದ ಹೆಚ್ಚಿನ ದೇಶಗಳು ಹಿಂದುಳಿದಿರುವ ಮೂಲಕಾರಣ ಬಂಡವಾಳದ ಕೊರತೆ. ಇಂದು ಪ್ರಪಂಚದಲ್ಲಿ ಶ್ರೀಮಂತ ದೇಶಗಳು ಅಗಾಧ ಪ್ರಮಾಣದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಿ ರುವುದು ಬಂಡವಾಳದಿಂದಲೇ ಎಂಬುದು ಸ್ಪಷ್ಟ. ಬಂಡವಾಳದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಅವುಗಳೆಂದರೆ: 1 ಸ್ವದೇಶಿ ಬಂಡವಾಳ ಮತ್ತು 2 ವಿದೇಶೀ ಬಂಡವಾಳ.

	ಇವುಗಳಲ್ಲಿ ವಿದೇಶೀ ಬಂಡವಾಳವು ಇಂದು ವಿವಿಧ ದೇಶಗಳ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳ ಆರ್ಥಿಕಾಭಿ ವೃದ್ಧಿಯಲ್ಲಿ ವಿದೇಶೀ ಬಂಡವಾಳದ ಪಾತ್ರ ಹಿರಿದಾದುದಾಗಿದೆ. ವಿದೇಶೀ ಬಂಡವಾಳ ಎಂದರೆ ಕೇವಲ ವಿದೇಶೀ ಹಣದ ನೆರವು ಎಂದರ್ಥವಲ್ಲ. ಏಕೆಂದರೆ ಇಂದು ವಿದೇಶೀ ಬಂಡವಾಳದ ಹೆಸರಿನಲ್ಲಿ ಯಂತ್ರಗಳು, ತಂತ್ರಜ್ಞಾನ, ತರಬೇತಿ, ಉತ್ಪಾದನಾ ನೈಪುಣ್ಯತೆ ಮುಂತಾದವುಗಳು ಕೂಡ ಲಭ್ಯವಾಗುತ್ತಿವೆ. ಆದ್ದರಿಂದ ವಿದೇಶೀ ಬಂಡವಾಳವನ್ನು ಸೌಮ್ಯ ಭಾಷೆಯಲ್ಲಿ “ವಿದೇಶೀ ನೆರವು” ಎಂದು ಕರೆಯಲಾಗುತ್ತದೆ. ವಿದೇಶೀ ಬಂಡವಾಳ ಇಂದು ಎಲ್ಲಿಲ್ಲದ ಪ್ರಾಮುಖ್ಯ ಪಡೆದಿದೆ.

	ಆರ್ಥಿಕಾಭಿವೃದ್ಧಿಗಾಗಿ ವಿದೇಶೀ ಬಂಡವಾಳವನ್ನು ಆಮದು ಮಾಡಿಕೊಳ್ಳುವ ಪರಿಪಾಠ ಹೊಸದೇನಲ್ಲ. ಇಂದು ಮುಂದುವರಿದ ಶ್ರೀಮಂತ ದೇಶಗಳೆಂದು ಕರೆಸಿಕೊಳ್ಳುತ್ತಿರುವ ದೇಶಗಳು ಕೂಡ ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ವಿದೇಶೀ ಬಂಡವಾಳವನ್ನು ಬಳಸಿಕೊಂಡಿವೆ. 17 ಮತ್ತು 18ನೆಯ ಶತಮಾನಗಳ ಇಂಗ್ಲೆಂಡ್, ಹಾಲೆಂಡ್ ದೇಶದಿಂದ ಬಂಡವಾಳದ ನೆರವು ಪಡೆದಿದೆ. 19ನೆಯ ಶತಮಾನದಲ್ಲಿ ಯುರೋಪಿ ನಿಂದ ಬೃಹತ್ ಪ್ರಮಾಣದಲ್ಲಿ ಹಣ ಹರಿದು ಬಂದುದರಿಂದ ಅಮೆರಿಕ ಪ್ರಗತಿ ಸಾಧಿಸುವುದು ಸಾಧ್ಯವಾಯಿತು. ರಷ್ಯ ಕೂಡ ಪ್ರಾರಂಭದಲ್ಲಿ ವಿದೇಶೀ ಹಣದ ನೆರವಿನಿಂದಲೇ ಪ್ರಗತಿ ಸಾಧಿಸಿತು. ವಿದೇಶೀ ಬಂಡವಾಳದ ನೆರವಿನಿಂದ ಅನೇಕ ದೇಶಗಳು ತ್ವರಿತ ಆರ್ಥಿಕಾಭಿವೃದ್ಧಿ ಯನ್ನು ಸಾಧಿಸಿವೆ. 18 ಮತ್ತು 19ನೆಯ ಶತಮಾನಗಳಲ್ಲಿ ಸಾಲಗಾರರಾಗಿದ್ದ ದೇಶಗಳು ಇಂದು ಬೇರೆ ದೇಶಗಳಿಗೆ ಸಾಲ ನೀಡುವ ಶಕ್ತಿ ಪಡೆದಿವೆ.

	ವಿದೇಶೀ ನೆರವಿನ ಜೊತೆಗೆ ತಂತ್ರಜ್ಞಾನ, ಉತ್ಪಾದನಾ ನೈಪುಣ್ಯ, ಯಂತ್ರೋಪಕರಣಗಳು ಹಾಗೂ ಮತ್ತಿತರ ನೆರವುಗಳು ಕೂಡ ಹರಿದು ಬರುವುದರಿಂದ ತ್ವರಿತ ಪ್ರಗತಿ ಸಾಧ್ಯವಾಗುತ್ತದೆ. ವಿದೇಶೀ ಬಂಡವಾಳ ಹಿಂದುಳಿದ ಬಡರಾಷ್ಟ್ರಗಳಲ್ಲಂತೂ ತುಂಬ ಮಹತ್ತರ ಪಾತ್ರವನ್ನು ವಹಿಸುತ್ತಿದೆ.

	ವಿದೇಶೀ ನೆರವು ಅಥವಾ ಬಂಡವಾಳ ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಬಡತನ, ನಿರುದ್ಯೋಗ ಮುಂತಾದ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ದೇಶಗಳಲ್ಲಿ ವಿದೇಶೀ ಬಂಡವಾಳ ಆರ್ಥಿಕಾಭಿವೃದ್ಧಿಯ ಜೀವಾಳವಾಗಬಲ್ಲದು. ಬಂಡವಾಳ ಕೊರತೆಯನ್ನು ಅನುಭವಿಸುತ್ತಿರುವ ಈ ದೇಶಗಳಲ್ಲಿ ವಿದೇಶೀ ಬಂಡವಾಳ ಪ್ರಗತಿಯ ಯಂತ್ರವಾಗಬಲ್ಲದು. ವಿವಿಧ ಕ್ಷೇತ್ರಗಳಲ್ಲಿ ಈ ಬಂಡವಾಳ ವಹಿಸುವ ಪಾತ್ರವನ್ನು ಈ ಕೆಳಗಿನಂತೆ ಕಾಣಬಹುದು. ಇದು ಬಂಡವಾಳದ ಕೊರತೆಯನ್ನು ನಿವಾರಿಸುತ್ತದೆ.  ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗುತ್ತದೆ. ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಉತ್ತೇಜನ ನೀಡುತ್ತದೆ. ಇದರಿಂದ ಕೈಗಾರಿಕೀಕರಣ ಸಾಧ್ಯ. ಪ್ರಾದೇಶಿಕ ಅಸಮತೋಲನ ನಿವಾರಣೆ, ಉದ್ಯೋಗಾವಕಾಶಗಳ ವಿಸ್ತರಣೆ, ಸಂಪನ್ಮೂಲಗಳ ವರ್ಧನೆ, ಜೀವನ ಮಟ್ಟದ ಸುಧಾರಣೆ, ರಾಷ್ಟ್ರೀಯ ಆದಾಯದ ಹೆಚ್ಚಳ, ಆರ್ಥಿಕ ಸಮಸ್ಯೆಗಳ ನಿರ್ಮೂಲನೆ, ಪಾವತಿ ಶುಲ್ಕದ ಸಮಸ್ಯೆಯ ಸುಧಾರಣೆ ಮತ್ತು ತ್ವರಿತ ಆರ್ಥಿಕಾಭಿವೃದ್ಧಿಗಾಗಿ ಆರ್ಥಿಕ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಹಕಾರಿಯಾಗುತ್ತದೆ. ವಿದೇಶೀ ಬಂಡವಾಳ ಹಿಂದುಳಿದ ದೇಶಗಳಲ್ಲಿನ ಸಮಾಜವನ್ನು ಆಧುನೀಕರಿಸಲು ಸಹಾಯ ಮಾಡುತ್ತದೆಯಲ್ಲದೆ ಈ ದೇಶಗಳಲ್ಲಿನ ಸಾರ್ವಜನಿಕ ಮತ್ತು ಖಾಸಗಿ ರಂಗಗಳೆರಡನ್ನೂ ಬಲಪಡಿಸುತ್ತದೆ.

	ವಿದೇಶೀ ಬಂಡವಾಳದಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳನ್ನು ಕಾಣುತ್ತೇವೆ. ಅವುಗಳೆಂದರೆ ವಿದೇಶೀ ಖಾಸಗಿ ಬಂಡವಾಳ ಮತ್ತು ವಿದೇಶೀ ಸಾರ್ವಜನಿಕ ಬಂಡವಾಳ. ಒಟ್ಟಿನಲ್ಲಿ ವಿದೇಶೀಯರಿಂದ ಹರಿದು ಬರುವ ಅಥವಾ ಚಲನೆಯಾಗುವ ನೆರವು ಅಥವಾ ಬಂಡವಾಳವನ್ನು ಸಾಮಾನ್ಯವಾಗಿ ಈ ಕೆಳಕಂಡ ರೀತಿಗಳಲ್ಲಿ ಕಾಣಬಹುದು.

1 ವಿದೇಶೀ ನೇರ ಹೂಡಿಕೆ
2 ವಿದೇಶೀ ಸಹ ಭಾಗಿತ್ವ 
3 ಪರೋಕ್ಷ ಅಥವಾ ಪೋರ್ಟ್ ಪೋಲಿಯೋ ಹೂಡಿಕೆ
4 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಾಲ
5 ಅಂತಾರಾಷ್ಟ್ರೀಯ ಸರ್ಕಾರದ ಸಾಲಗಳು
6 ಬಾಹ್ಯ ವಾಣಿಜ್ಯ ಸಾಲಗಳು (ರಫ್ತು ಸಾಲ)

	ವಿದೇಶೀ ಬಂಡವಾಳ ಅನುಕೂಲ ಮತ್ತು ಅನನುಕೂಲಗಳೆರಡನ್ನು ಹೊಂದಿರುತ್ತದೆ. ಆದರೆ ಅನುಕೂಲಗಳೆಷ್ಟು ಲಭ್ಯವಿರುತ್ತವೆಂಬುದು ಆ ಸಂದರ್ಭದ ಪರಿಸ್ಥಿತಿ ಮತ್ತು ಸನ್ನಿವೇಶಗಳಿಂದ ನಿರ್ಧರಿಸಲ್ಪಡುತ್ತದೆ. ಎಷ್ಟೇ ದೋಷಗಳು ಅಥವಾ ಅನಾನುಕೂಲತೆಗಳಿದ್ದರೂ ವಿದೇಶೀ ಬಂಡವಾಳ ಮುಖ್ಯವೂ ಅನಿವಾರ್ಯವೂ ಆಗಿದೆ.			
	(ಎಚ್.ಜಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ